ಪುನುಗು ಬೆಕ್ಕು
ಕಾರ್ನಿವೊರ ಗಣದ ವೈವರಿಡೀ ಕುಟುಂಬಕ್ಕೆ ಸೇರಿದ ಮಾಂಸಾಹಾರಿ ಸ್ತನಿ (ಸಿವೆಟ್). ವಾಸ್ತವವಾಗಿ ಈ ಹೆಸರು ಭಾರತದಲ್ಲಿ ಕಾಣಬರುವ ವೈವರ ಜಿóಬೆತ, ವೈವರಿಕ್ಯುಲ ಇಂಡಿಕ, ಫಿಲಿಪೀನ್ಸನಲ್ಲಿಯ ವೈವರ ಟಾಂಗಲೂಂಗ ಹಾಗೂ ಆಫ್ರಿಕದ ಸಿವೆಟಿಕ್ಟಸ್ ಸಿವೆಟ್ ಎಂಬ ಪ್ರಭೇದಗಳಿಗೆ ಅನ್ವಯವಾಗುತ್ತದೆ.  ಇವುಗಳ ಪ್ರಜನನಾಂಗಗಳ ಬಳಿ ಸುಗಂಧ ವಸ್ತು ಸ್ರವಿಸುವ ಗ್ರಂಥಿಗಳಿವೆ. ಈ ವಸ್ತು ಪುನುಗು, ಗುದದ್ವಾರದ ಬಳಿ ಇರುವ ಸಂಚಿಯೊಂದಕ್ಕೆ ಸುರಿದು ಸಂಗ್ರಹಗೊಳ್ಳುತ್ತದೆ.  ಆರಂಭದಲ್ಲಿ ಜಿಗುಟಾದ ದ್ರವದಂತಿದ್ದು ಹಳದಿ ಬಣ್ಣಕ್ಕಿರುವ ಇದು ಸ್ವಲ್ಪ ಸಮಯದಲ್ಲಿ ಸುಗಂಧಾಂಜನದ ಸಾಂದ್ರತೆಯನ್ನು ಪಡೆದು ಕಪ್ಪು ಬಣ್ಣವನ್ನು ತಳೆಯುತ್ತದೆ. ಇದಕ್ಕೆ ಬಹು ಕಟುವಾದ ಕಸ್ತೂರಿ ವಾಸನೆ ಇದೆ. ಇದರ ಅನುಭವವಿಲ್ಲದವರಿಗೆ ಹಿಡಿಸದೇ ಇರಬಹುದು. ಇದರೊಂದಿಗೆ ಸಮಪ್ರಮಾಣದಲ್ಲಿ ನೀರು ಬೆರೆಸಿ ಇತರ ಸುಗಂಧಗಳೊಡನೆ ಸೇರಿಸಿದಾಗ ಉತ್ತಮವಾದ ಮನಸ್ಸಿಗೆ ಆಹ್ಲಾದವನ್ನುಂಟುಮಾಡುವ ಪುಷ್ಪಸದೃಶವಾದ ಸುವಾಸನೆಯನ್ನು ಕೊಡುತ್ತದೆ.

ಭಾರತದಲ್ಲಿ ಕಾಣಸಿಗುವ ಪುನುಗು ಬೆಕ್ಕು ವೈವರ ಜಿಬೆತ ಸುಮಾರು 80 ಸೆಂ.ಮೀ. ಉದ್ದದ ಪ್ರಾಣಿ. ಸುಮಾರು 7-11 ಕೆ.ಜಿ. ತೂಗುತ್ತದೆ. ಉದ್ದ ಮೂತಿ, ಮೋಟು ಕಾಲುಗಳು, ಕಪ್ಪು ಮಿಶ್ರಿತ ಬೂದು ಬಣ್ಣ, ಬೆನ್ನಿನ ಉದ್ದಕ್ಕೂ ಕತ್ತಿನಿಂದ ಬಾಲದವರೆಗೂ ಹಬ್ಬಿರುವ ಕಪ್ಪು ಕೂದಲಿನ ಏಣು, ಎದೆ ಹಾಗೂ ಭುಜಗಳ ಮೇಲಿನ ಕಪ್ಪು ಪಟ್ಟೆಗಳು-ಇವು ಇದರ ಪ್ರಧಾನ ಲಕ್ಷಣಗಳು.  ಬಾಲ ಸುಮಾರು 45 ಸೆಂ.ಮೀ. ಉದ್ದಕ್ಕಿದೆ. ಬಾಲದ ಮೇಲೆ ಅಡ್ಡ ಪಟ್ಟೆಗಳುಂಟು. ಇದು ಸಾಧಾರಣವಾಗಿ ಒಂಟಿ ಜೀವಿ.  ನಿಶಾಚರಿ; ಹಗಲೆಲ್ಲ ಪೊದೆಗಳಲ್ಲಿ ಅಡಗಿದ್ದು ರಾತ್ರಿಯ ವೇಳೆ ಆಹಾರಾನ್ವೇಷಣೆಯಲ್ಲಿ ತೊಡಗುತ್ತದೆ. ಸಣ್ಣಪುಟ್ಟ ಸ್ತನಿಗಳು, ಹಕ್ಕಿಗಳು, ಕಪ್ಪೆಗಳು, ಹಾವು, ಕೀಟಗಳು, ಹಣ್ಣು ಬೇರುಗಳು ಇದರ ಮೆಚ್ಚಿನ ಆಹಾರ. ಕೆಲವೊಮ್ಮೆ ಮೀನು, ಏಡಿ ಮುಂತಾದವನ್ನು ತಿನ್ನುವುದುಂಟು. 

ಇದರ ಸಂತಾನೋತ್ಪತ್ತಿಯ ಕಾಲ ಮೇ-ಜೂನ್ ತಿಂಗಳು. ಒಂದು ಸಲಕ್ಕೆ 3-4 ಮರಿಗಳು ಹುಟ್ಟುವುವು. ಬಿಲಗಳಲ್ಲಿ ಇಲ್ಲವೇ ದಟ್ಟ ಪೊದೆಗಳಲ್ಲಿ ಮರಿಗಳನ್ನು ಈಯುವುದು. 

ಭಾರತದಲ್ಲಿ ಸಿಕ್ಕುವ ಇನ್ನೊಂದು ಪುನುಗು ಬೆಕ್ಕು, ವೈವರಿಕ್ಯುಲ ಇಂಡಿಕ ಹೆಚ್ಚು ಕಡಿಮೆ ವೈವರದಂತೆಯೆ ಇದೆ. ಆದರೆ, ಇದರಲ್ಲಿ ಬೆನ್ನಗುಂಟ ಏಣು ಇಲ್ಲ. ದೇಹದ ಎರಡೂ ಕಡೆ ಉದ್ದುದ್ದನೆಯ ಪಟ್ಟೆಗಳಿವೆ. ಇದು ಹೆಚ್ಚು ಕಡಿಮೆ ಭಾರತಾದ್ಯಂತ ಕಾಣದೊರೆಯುತ್ತದೆ. ಬರ್ಮ, ಶ್ರೀಲಂಕಾ, ಮಲೇಷಿಯಾಗಳಲ್ಲೂ ಉಂಟು.

ಆಫ್ರಿಕದ ಪುನುಗು ಬೆಕ್ಕು ಸಿವೆಟಿಕ್ಟಸ್ ಸಿಬೆಟ್ ಎಂಬುದು 67-80 ಸೆಂ.ಮೀ. ಉದ್ದ ಇದೆ. ಇದರ ಮೈ ಬಣ್ಣ ಕಪ್ಪು. ಅಲ್ಲಲ್ಲಿ ಹಳದಿ ಬಿಳಿ ಬಣ್ಣದ ಮಚ್ಚೆಗಳು, ಪಟ್ಟೆಗಳು ಇವೆ. ಇದೂ ಕೂಡ ನಿಶಾಚರಿ. ಒಂಟಿಯಾಗಿ ಇಲ್ಲವೇ ಜೋಡಿಗಳಲ್ಲಿ ವಾಸಿಸುತ್ತದೆ. 

ಈ ಎಲ್ಲ ಪ್ರಭೇದಗಳನ್ನು ಸಾಕಬಹುದಾಗಿದ್ದು ಅವುಗಳಿಂದ ತಿಂಗಳಿಗೊಮ್ಮೆ ಇಲ್ಲವೇ ವಾರಕ್ಕೊಮ್ಮೆ ಪುನುಗನ್ನು ಪಡೆಯುವುದಿದೆ. ಪುನುಗು ಬೆಕ್ಕನ್ನು ಸಣ್ಣ ಪಂಜರಗಳಲ್ಲಿಟ್ಟು ಕೊಂಬಿನ ಚಮಚೆಗಳಿಂದ ಪುನುಗನ್ನು ಬಗೆದು ತೆಗೆಯಲಾಗುತ್ತದೆ. ಇವನ್ನು ಪೀಡಿಸಿ ರೊಚ್ಚಿಗೆಬ್ಬಿಸಿದರೆ ಹೆಚ್ಚು ಪುನುಗು ಒಸರುತ್ತದೆ. ಒಂದು ಬೆಕ್ಕಿನಿಂದ ವಾರಕ್ಕೆ 30 ಗ್ರಾಮ್ ಪುನುಗನ್ನು ಪಡೆಯಬಹುದು.

ಪುನುಗನ್ನು ಕಾಮೋತ್ತೇಜಕವಾಗಿ ಹಾಗೂ ತಂಬಾಕಿನ ಸುವಾಸನೆ ಕಟ್ಟುವ ಸಲುವಾಗಿ ಬಳಸುವುದಿತ್ತು. ಆದರೆ, ಇತ್ತೀಚಿಗೆ ಇದನ್ನು ಕೊನ್ನಾರಿಗೆಡ್ಡೆ ಮತ್ತಿತರ ನೈಸರ್ಗಿಕ ರೆಸಿನ್‍ಗಳೊಂದಿಗೆ ಮಿಶ್ರ ಮಾಡಿ ಸುಗಂಧದ್ರವ್ಯಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತಿದೆ. 			           						(ಜೆ.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ